ಕೊಪ್ಪಳದ ತಲ್ಲೂರು ಕೆರೆಯ ಪುನರುಜ್ಜೀವನ

Home / ಪ್ರಸ್ತುತ ಯೋಜನೆಗಳು / ಕೊಪ್ಪಳದ ತಲ್ಲೂರು ಕೆರೆಯ ಪುನರುಜ್ಜೀವನ

ಕೃಪೆ – ಶಿವಾನಂದ ಕಳವೆ ಮತ್ತು ರಾಧಾಕೃಷ್ಣ ಬಡತಿ
ಇಬ್ಬರೂ ಪರಿಸರ ಹಾಗೂ ಜಲಸಂರಕ್ಷಣೆಗಾಗಿ ನಿಸ್ಪೃಹರಾಗಿ ದುಡಿದವರು..


ಯಶೋಮಾರ್ಗ ಫೌಂಡೇಶನ್ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರ್ ಕೆರೆ ಹೂಳು ತೆಗೆಯುವುದು ಏಕೆ ಮುಖ್ಯ ?

ಕೊಪ್ಪಳ ಜಿಲ್ಲೆ ಕಳೆದ ವರ್ಷ ಬರಗಾಲಕ್ಕೆ ತುತ್ತಾಯಿತು. ಬರ ಈ ಪ್ರದೇಶಕ್ಕೆ ಹೊಸತಲ್ಲ, ಅತ್ಯಂತ ಕಡಿಮೆ ಮಳೆ ಸುರಿದರೂ ಮಣ್ಣಿನ ತೇವ ಆರದಂತೆ ಹೊಲಕ್ಕೆ ಮರಳು ಮುಚ್ಚಿಗೆ ಮಾಡಿ ಬೆಳೆ ತೆಗೆಯುವ ವಿದ್ಯೆ ಇಲ್ಲಿನ ಹಿರಿಯರಲ್ಲಿದೆ. ಮಳೆ ಕೈಕೊಟ್ಟರೆ ಸಜ್ಜೆ, ಮೆಕ್ಕೆಜೋಳ ಬೆಳೆಯುವುದಿಲ್ಲ, ಹಿಂಗಾರು ಸುರಿಯದಿದ್ದರೆ ಹುರಳಿ, ತೊಗರಿ ದೊರೆಯುವುದಿಲ್ಲವೆಂದು ಮಸಾರಿ ನೆಲದ ರೈತರಿಗೆ ಗೊತ್ತಿದೆ. ಬೆಳೆ ಇಲ್ಲದಿದ್ದರೆ ಆಹಾರದ ಉತ್ಪಾದನೆಯಿಲ್ಲ, ಜಾನುವಾರುಗಳಿಗೆ ಮೇವು ಸಿಗುವುದಿಲ್ಲವೆಂದು ಸರಳವಾಗಿ ಎಲ್ಲರಿಗೂ ಅರ್ಥವಾಗುತ್ತದೆ. ಆದರೆ ಇಂಥ ಕಡುಬರದಲ್ಲಿ ಮುಂಜಾಗೃತೆಯ ಯಾವ ಹೆಜ್ಜೆಯೂ ಕೊಪ್ಪಳದಲ್ಲಿ ಕಳೆದ ವರ್ಷ ಶುರುವಾಗಲಿಲ್ಲ. ಕುಡಿಯುವ ನೀರಿಗೆ ಸಮಸ್ಯೆಯಾಗಿ ಅಂತೂ ಟ್ಯಾಂಕರ್ ಹೊರಟಿತು. ದನಕರುಗಳ ಮೇವಿನ ಕತೆಯೇನು ? ಹುಲ್ಲು, ನೀರಿಲ್ಲದೇ ಪರಿತಪಿಸುತ್ತಿದ್ದರೂ ನೆಲದ ಬರದ ಭಾಷೆ ಯಾರಿಗೂ ತಿಳಿಯಲಿಲ್ಲ.

2016ರ ಎಪ್ರಿಲ್ ಎರಡನೇ ವಾರದಲ್ಲಿ ಸಮಸ್ಯೆ ಹೆಚ್ಚುತ್ತ ಹೋದಂತೆ ರೈತರು ಸಂಘಟಿತರಾದರು. ಕೃಷ್ಣಾ ‘ಬಿ’ಸ್ಕೀಮ್‍ನಿಂದ ಕೆರೆಗಳಿಗೆ ನೀರು ತುಂಬುವ ಮಹತ್ವಾಕಾಂಕ್ಷೆಯ ಕಾರ್ಯಕ್ಕೆ ಗಮನಸೆಳೆಯಲು ಮುಂದಾದರು. ಎಲ್ಲಕ್ಕಿಂತ ತುರ್ತಾಗಿ ದನಕರುಗಳ ಜೀವ ಉಳಿಸಲು ಗೋ ಶಾಲೆ ಆರಂಭಿಸಬೇಕೆಂದು ಆಗ್ರಹಿಸಿದರು. ರೈತರ ನೋವು ಯಾರಿಗೂ ಅರ್ಥವಾಗಲಿಲ್ಲ. ಯಲಬುರ್ಗಾದಲ್ಲಿ ಬರದ ಕಷ್ಟದ ಮಧ್ಯೆ ರೈತ ಹೋರಾಟ ಶುರುವಾಯ್ತು. ಸತತ ಆರು ದಿನಗಳ ಕಾಲ ಅಹೋರಾತ್ರಿ ಸಾವಿರಾರು ರೈತರು ತಾಲೂಕಾ ಕೇಂದ್ರಕ್ಕೆ ನೂರಾರು ಜನ ಮುತ್ತಿಗೆ ಹಾಕಿ ಕೆರೆಗಳಿಗೆ ನೀರು ತುಂಬಿಸಿ, ಗೋಶಾಲೆ ಪ್ರಾರಂಭಿಸಿ ಎಂದು ಚಳವಳಿ ನಡೆಸಿದರು. ಅಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿದರು. ಕಣ್ತೆರೆದ ಆಡಳಿತ ತಲ್ಲೂರು ಕೆರೆಯಂಚಿನಲ್ಲಿ 2016ರ ಎಪ್ರಿಲ್ 19ರಂದು ಗೋಶಾಲೆ ಆರಂಭಿಸಿತು. ಅಲ್ಲಿಗೆ ಸುಮಾರು 800 ಜಾನುವಾರುಗಳು ಬಂದವು. ಗೋಶಾಲೆ ಆರಂಭಿಸಲು ಆಡಳಿತ ಏಕೆ ತಡಮಾಡಿತು ? ಪ್ರಶ್ನೆ ಕಾಡಬಹುದು. ಸರಕಾರಕ್ಕೆ ಕಾಳಜಿಯಿದ್ದರೂ ದನಕರುಗಳಿಗೆ ಕುಡಿಯಲು ಯೋಗ್ಯ ನೀರು ತಾಲೂಕಿನ ಯಾವ ಕೆರೆಯಲ್ಲಿಯೂ ಇರಲಿಲ್ಲ !

  

ಈಗಿರುವ ಮಟ್ಟಕ್ಕಿಂತ ಇನ್ನೂ 10 ಅಡಿ ಹೂಳು ತೆಗೆದರೆ ಇಡೀ ಪ್ರದೇಶದ ಪರಿಸರ ಬದಲಾಗುತ್ತದೆ. ಬರಗಾಲದ ತಾಲೂಕು ಶತಮಾನ ನೆನಪಿಡುವ ಕಾರ್ಯವಾಗುತ್ತದೆ. 1976ರಲ್ಲಿ ಕೆರೆ ಕಾಯಕಕ್ಕೆ ಶ್ರಮದಾನಕ್ಕೆ ಬಂದವರು ವಜ್ರಬಂಡಿಯ ಭೀಮನಗೌಡ ಮಾಲಿಪಾಟೀಲ್, 72 ವರ್ಷದ ಇದೇ ಹಿರಿಯರು ಬರಕ್ಕೆ ತತ್ತರಿಸಿ ತಮ್ಮ ಎತ್ತುಗಳೊಂದಿಗೆ ತಲ್ಲೂರು ಗೋಶಾಲೆಗೆ ಕಳೆದ ವರ್ಷ ಬಂದಿದ್ದರು. ಕೆರೆಯಲ್ಲಿ ಇಷ್ಟಾದರೂ ನೀರಿದ್ದರಿಂದ ಎತ್ತುಗಳ ಜೀವ ಉಳಿಯಿತು ಎನ್ನುತ್ತಾರೆ. ಸುತ್ತಲಿನ 18 ಕಿಲೋ ಮೀಟರ್ ದೂರದ ಊರಿನ ದನಕರು ಇಲ್ಲಿ ಆಶ್ರಯ ಪಡೆದವು.

ಚಿಕ್ಕ ಹಿಡುವಳಿಯಲ್ಲಿ ಬೆಳೆ ವೈವಿಧ್ಯ:
ಕೆರೆಯ ಹೂಳು ತೆಗೆದರೆ ಹೆಚ್ಚು ನೀರು ಸಂಗ್ರವಾಗಿ ಭವಿಷ್ಯದ ಬರ ಎದುರಿಸಲು ತಾಲೂಕಿಗೆ ಶಕ್ತಿ ದೊರೆಯುತ್ತದೆ. ಕುಷ್ಟಗಿಯ ಯುವಕ ರಮೇಶ ಬಲೂಟಗಿ ದಶಕಗಳಿಂದ ಕೃಷಿ ಕಾಡಿನ ಜಾಗೃತಿಯಲ್ಲಿ ನಿರತರಾಗಿದ್ದಾರೆ. ಇಲ್ಲಿನ ಬಹುತೇಕ ಕೃಷಿಕರು ಚಿಕ್ಕ ಹಿಡುವಳಿದಾರರು. 3-4 ಎಕರೆ ಜಮೀನು ಉಳ್ಳವರು ಜಾಸ್ತಿ. ಚಿಕ್ಕ ಭೂಮಿಯಲ್ಲಿ ಬೆಳೆ ವೈವಿಧ್ಯ ಪೋಷಿಸಿ ಬದುಕುವ ರೈತ ಜಾಣ್ಮೆ ನಾಡಿನ ಬಹುಸಂಖ್ಯಾತ ಕೃಷಿಕರಿಗೆ ಪ್ರೇರಣೆ ನೀಡುವಂತಿದೆ.

  

ಹೈದ್ರಾಬಾದ್ ಕರ್ನಾಟಕದಲ್ಲಿ ಸ್ಪೂರ್ತಿದಾಯಕ ಜಲಕಾಯಕ :
ಕೆರೆ ಹೂಳು ತೆಗೆಯುವ ಕಾರ್ಯಕ್ಕೆ ಸಮಯ ನೀಡಲು ಶ್ರದ್ಧಾಳುಗಳ ಪಡೆಯಿದೆ. ಸರಕಾರ, ಜನತೆ ಒಂದಾಗಿ ಯಶೋಮಾರ್ಗದ ನೆರವಿನಿಂದ ಇಡೀ ರಾಜ್ಯಕ್ಕೆ ಮಾದರಿಯಾಗಿ ಜಲಕಾಯಕ ಮಾಡಬಹುದು. ರಾಜ್ಯದ ಜಲತಜ್ಞರ ತಂಡ ಮಾರ್ಗದರ್ಶನಕ್ಕೆ ಸಿದ್ದವಿದೆ. ಹೈದ್ರಾಬಾದ್ ಕರ್ನಾಟಕವನ್ನು ಮರೆತು ಈ ರಾಜ್ಯದ ಕೃಷಿ ಏಳ್ಗೆ ಸಾಧ್ಯವಿಲ್ಲ. ಕೆರೆ ಹೂಳೆತ್ತುವ ಕಾಯಕ ತಲ್ಲೂರ್ ಕೆರೆಯಿಂದ ಆರಂಭಿಸುವುದು ಸೂಕ್ತವೆಂಬುದು ನನ್ನ ಆಭಿಪ್ರಾಯ. ಮಳೆಯಿಲ್ಲದ ಯಲಬುರ್ಗಾದಲ್ಲಿ ಕೆರೆ ನಿರ್ಮಿಸಿದರೆ ನೀರು ಎಲ್ಲಿಂದ ಬರುತ್ತದೆಂದು ಕೇಳಬಹುದು. ಅಕಾಲಿಕ ಮಳೆ ಈಗ ಬರದ ನೆಲವನ್ನು ಆಗಾಗ ಕಾಡುತ್ತದೆ. ಹರಿಯುವ ನೀರನ್ನು ವಿಶಾಲ ಜಲಪಾತ್ರೆಯಲ್ಲಿ ಹಿಡಿದಿಟ್ಟರೆ ದೊಡ್ಡ ಬದಲಾವಣೆ ಮೂಡಿಸಬಹುದು.

ಕೆಲವು ವಿಚಾರಮಾಡುವ ಸಂಖ್ಯೆಗಳು:
ತಾಲ್ಲೂಕಿನ ಒಟ್ಟು ಸರೋವರಗಳು: 92
ಸರೋವರದ ಪ್ರದೇಶ: 100 ಎಕರೆ
ಕೊನೆಯ ಬಾರಿಗೆ ಸರೋವರದ ತುಂಬಿದ್ದು: 2012-13
ವೆಟ್ ಲ್ಯಾಂಡ್ ಏರಿಯ: ವಜ್ರ್ಖಂಡಿ, ತಲ್ಲೂರ್, ವೀರಾಪುರ, ಸಾಲಭಾವಿ, ಗೊರವನಹಳ್ಳಿ, ಜರ್ಮನಿಟಿ, ಗೆಡಘೇರಿ – ಒಟ್ಟು 15 ಹಳ್ಳಿಗಳು
ಜನಸಂಖ್ಯೆ: ಸುಮಾರು 2 ಲಕ್ಷ
ಜಾನುವಾರು ಜನಸಂಖ್ಯೆ: 50000
ಮುಖ್ಯ ಉದ್ಯೋಗ: ಕೃಷಿ
ನೀರಾವರಿ ಭೂಮಿ: ಸುಮಾರು 20000 ಎಕರೆ
ಪ್ರಮುಖ ಬೆಳೆಗಳು: ದಾಳಿಂಬೆ, ನಿಂಬೆ, ಪಪ್ಪಾಯಿ, ಕಿತ್ತಳೆ, ದ್ರಾಕ್ಷಿ, ಸಪೋಟ, ಮಾವು, ಸಿಟ್ರಸ್, ಬಾಳೆ
ಮಣ್ಣಿನ ಪ್ರಕೃತಿ: ಬ್ಲಾಕ್ ಮಣ್ಣು
ಹಣ್ಣುಗಳು, ತೋಟಗಾರಿಕೆ ಮತ್ತು ಬೀಜಗಳು: ಹೆಸರುವಾಸಿಯಾಗಿದೆ
ಅರಣ್ಯ ವ್ಯಾಪ್ತಿ: ಶ್ರೀಗಂಧದ ತೇಗು, ಹೆಬ್ಬೆವು

ಓದಿ : ತಲ್ಲೂರು ಕೆರೆ ಕಾಯಕ – ಅಪ್ಡೇಟ್ಸ್